ಪಕ್ಷಿ ನೋಟ
ಜಿಲ್ಲೆಯ ಭೌಗೋಳಿಕ ಇತಿಹಾಸ: ಸಕ್ಕರೆ ಜಿಲ್ಲೆಯೆಂದು ಪ್ರಖ್ಯಾತಿ ಪಡೆದಿರುವ ಬೆಳಗಾವಿ ಜಿಲ್ಲೆಯು ಕರ್ನಾಟಕ ರಾಜ್ಯದ ವಾಯವ್ಯ ಭಾಗದಲ್ಲಿದ್ದು, ಪಶ್ಚಿಮ ಭಾಗದಲ್ಲಿ ಗೋವಾ ರಾಜ್ಯ ಮತ್ತು ಉತ್ತರಕ್ಕೆ ಮಹಾರಾಷ್ಟ್ರರಾಜ್ಯವನ್ನು ಹೊಂದಿರುತ್ತದೆ. ಜಿಲ್ಲೆಯ ಒಟ್ಟು ವಿಸ್ತಿರ್ಣವು 13415 ಚದರ ಕಿಲೋಮೀಟರ ಇದ್ದು, 1138 ಗ್ರಾಮಗಳನ್ನು ಹೊಂದಿರುತ್ತದೆ. ಕೃಷ್ಣಾ, ಘಟಪ್ರಭಾ, ಮಲಪ್ರಭಾ, ವೇದಗಂಗಾ ಮತ್ತುದೂಧಗಂಗಾ ಇವುಗಳು ಜಿಲ್ಲೆಯ ಪ್ರಮುಖ ಜೀವನದಿಗಳಾಗಿವೆ. ಜಿಲ್ಲೆಯಲ್ಲಿ ಸರಾಸರಿ 594.90 ಮಿ.ಮೀಟರ ಮಳೆಯಾಗುವುದು. ಇಲ್ಲಿಯ ಭೂಮಿಯು ಫಲವತ್ತಾಗಿದ್ದು, ಸ್ವಾಭಾವಿಕವಾಗಿ ಸಾಕಷ್ಟು ಹಸಿರು ಮೇವಿನ ಲಭ್ಯತೆ ಇರುವುದರಿಂದ, ಮತ್ತು ಜಿಲ್ಲೆಯ ಹವಾಮಾನವು ಹೈನುಗಾರಿಕೆಗೆ ಯೋಗ್ಯವಾಗಿರುವ ಪ್ರಯುಕ್ತ, ರೈತರು ಕೃಷಿಯೊಂದಿಗೆ ಮುಖ್ಯ ಉಪಕಸಬನ್ನಾಗಿ ಹೈನುಗಾರಿಕೆಯನ್ನು ಅವಲಂಬಿಸಿರುತ್ತಾರೆ. ರೈತರು ಹೆಚ್ಚು ಹೈನುರಾಸು ಸಾಕಾಣಿಕೆಗೆ ಆದ್ಯತೆ ಕೊಡುತ್ತಿರುವುದರಿಂದ, ಹೈನು ರಾಸುಗಳ ಸಂಖ್ಯೆ 7ಲಕ್ಷ ಇರುತ್ತದೆ. ಹೈನುಗಾರಿಕೆಯಿಂದ ಮತ್ತು ಇದಕ್ಕೆ ಸಂಬಂಧಿಸಿದ ಚಟುವಟಿಕೆಯಿಂದ ವಾರ್ಷಿಕ ರೂ.875.00ಕೋಟಿ ಜಿಲ್ಲೆಗೆ ಆದಾಯ ಇರುತ್ತದೆ. ಜಿಲ್ಲೆಯು ನೀರಾವರಿ ಮತ್ತು ಮಳೆಯಾಶ್ರಿತ ಪ್ರದೇಶ ಆಗಿರುವುದರಿಂದ, ಕಬ್ಬು, ತಂಬಾಕು, ಹತ್ತಿ ಇವುಗಳನ್ನು ವಾಣಿಜ್ಯ ಬೆಳೆಗಳಾಗಿ, ಮತ್ತು ಭತ್ತ, ಗೋವಿನಜೋಳ, ಜೋಳ, ಎಣ್ಣೆ ಕಾಳುಗಳನ್ನು ಆಹಾರ ಬೆಳೆಗಳಾಗಿ ಬೆಳೆಯಲಾಗುತ್ತಿದೆ.
ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ, ರಾಜ್ಯದಲ್ಲಿ 1974ರಲ್ಲಿ ವಿಶ್ವ ಬ್ಯಾಂಕಿನ ಸಹಾಯದೊಂದಿಗೆ ಡೇರಿ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳಲಾಯಿತು. ಈ ಯೋಜನೆ ಅಡಿ ಹೈನುಗಾರಿಕೆಗೆ ಪ್ರಾಧಾನ್ಯತೆ ನೀಡುವ ದೃಷ್ಟಿಯಿಂದ, ಅಮೂಲ ಮಾದರಿ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಪ್ರಾರಂಭಿಕವಾಗಿ ರಾಜ್ಯದ ದಕ್ಷಿಣ ಭಾಗದ 8 ಜಿಲ್ಲೆಗಳಲ್ಲಿ ಪ್ರಾರಂಭಿಸಲಾಯಿತು. ತದನಂತರ 1983ರಲ್ಲಿ ಕ್ಷೀರಧಾರೆ-3ನೇ ಯೋಜನೆ ಅಡಿ, ಬೆಳಗಾವಿ ಜಿಲ್ಲೆಯಲ್ಲಿ ಅಮೂಲ ಮಾದರಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು.
ಬೆಳಗಾವಿ ಹಾಲು ಒಕ್ಕೂಟವು ಸಹಕಾರ ಸಂಘಗಳ ಕಾಯ್ದೆಯಡಿ 1985ರಲ್ಲಿ ನೋಂದಣಿ ಯಾಗಿದ್ದು, ಬೆಳಗಾವಿ ಜಿಲ್ಲೆಯನ್ನು ಕಾರ್ಯವ್ಯಾಪ್ತಿಯನ್ನಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯು 14 ತಾಲ್ಲೂಕುಗಳನ್ನು ಹೊಂದಿದ್ದು, ಈಗಾಗಲೇ ಎಲ್ಲಾ ತಾಲ್ಲೂಕುಗಳನ್ನು ಸೇರಿ ಒಟ್ಟು 984 ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ 646 ಹಾಲು ಉತ್ಪಾದಕರ ಸಹಕಾರ ಸಂಘಗಳು ಕಾರ್ಯಾಚರಣೆಯಲ್ಲಿ ಇವೆ.